Friday, October 27, 2023

ಉಪನಿಷತ್ - ಕೈವಲ್ಯೋಪನಿಷತ್

 

ಕೈವಲ್ಯೋಪನಿಷತ್ 

ನಮಸ್ಕಾರ ಸ್ನೇಹಿತರೆ, ಭಾರತದ ಪುರಾತನ ಆದ್ಯಾತ್ಮ ಅವಿಷ್ಕಾರಗಳಲ್ಲಿ, ವೇದ ಮತ್ತು ಉಪನಿಷತ್ ಗಳು, ಮೂಲ ಅನ್ವೇಷಣೆಗಳು. ಅವುಗಳನ್ನು ಅನ್ವೇಷಣೆ ಮಾಡಿ ಮನುಕುಲಕ್ಕೆ ಕೊಡುಗೆ ನೀಡಿದ ಎಲ್ಲ ಮಹಾ ಋಷಿಗಳು ಮತ್ತು ಬ್ರಹ್ಮ ಋಷಿಗಳ ಪಾದಗಳಿಗೆ, ನಮಸ್ಕರಿಸುತ್ತಾ, ಇಂದು ನಾವು ಕೈವಲ್ಯೋಪನಿಷತ್ತನ್ನು ಅರಿಯುವ ಪ್ರಯತ್ನ ಮಾಡೋಣ.

 

ಸೂಚನೆ:

ನಾನು ಸಂಸ್ಕೃತ ಬಲ್ಲವನಲ್ಲ, ವೇದ ಉಪನಿಷತ್ ಅನ್ನು ಗುರುಗಳ ಮೂಲಕ ಅಧ್ಯಯನ ಮಾಡಿದವನು ಅಲ್ಲ, ಆದರೆ ನನಗೆ ಇರುವ ಗುರುಗಳ ಆಶೀರ್ವಾದ ಮತ್ತು ನನ್ನ ಅನ್ವೇಷಣಾ ಮನೋಭಾವ, ಶ್ರದ್ದೆ, ಭಕ್ತಿ, ಮತ್ತು ಕಠಿಣ ಧ್ಯಾನ ಸಾಧನೆ ನನಗೆ ಜಗತ್ತಿನ ಎಲ್ಲ ಸಾಕ್ಷಾತ್ಕಾರವಾದ ಗುರುಗಳು, ಅವರ ಬರೆದ ಸೂಕ್ಮ ಜ್ಞಾನದ ಗ್ರಂಥಗಳು, ಭಗವದ್ಗೀತೆ ಮತ್ತು ಉಪನಿಷತ್ ಅನ್ನು ಅನುಭವ ಪೂರ್ವಕವಾಗಿ ಅರ್ಥ ಮಾಡಿಕೊಳ್ಳುವ ಅರ್ಹತೆ ಕೊಟ್ಟಿದೆ. ನಾನು ಇಲ್ಲಿ ಕನ್ನಡದಲ್ಲಿ ಕೊಟ್ಟಿರುವ ಸಂಸ್ಕೃತದ ಶ್ಲೋಕಗಳಲ್ಲಿ ಕೆಲವಾರು ತಪ್ಪುಗಳು ಇವೆ, ಆದರೆ ಅದನ್ನು ಸರಿಪಡಿಸುವ ಸಂಸ್ಕೃತದ ಜ್ಞಾನ ನನಗಿಲ್ಲ, ನನಗೆ ಇರುವ ಒಂದೇ ಒಂದು ತುಡಿತ ಎಂದರೆ, ಎಷ್ಟು ಬೇಗ ನಿಮಗೆ ಉಪನಿಷತ್ ಸಂದೇಶವನ್ನು ಹಂಚಿಕೊಂಡು, ನಿಮ್ಮನ್ನು ಇನ್ನು ಹೆಚ್ಚು ಧ್ಯಾನ ಮಾಡಲು ಪ್ರೇರೇಪಿಸಬೇಕು ಎನ್ನುವುದು, ಇದರ ಮುಖ್ಯ ಉದ್ದೇಶ.

ಒಂದುವೇಳೆ ನೀವು ಆಗಲೇ ಧ್ಯಾನ ಮಾಡುತ್ತಾ ಇದ್ದಾರೆ, ಇದರಲ್ಲಿ ಹೇಳಿದ ಸಾಕಷ್ಟು ವಿಷಯಗಳು, ಸತ್ಯದ ಸಂಗತಿಗಳು ಎಂದು ನಿಮಗೆ ಅನ್ನಿಸುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಜಗತ್ತಿನಲ್ಲಿ ಮೆಡಿಟೇಶನ್ ಎನ್ನುವ ಪದ ಹುಟ್ಟುವ ಸಾವಿರಾರು ವರ್ಷಗಳ ಮೊದಲೇ, ಧ್ಯಾನದ ಮಹತ್ವ, ಪದ್ಧತಿ, ಮತ್ತು ವಿಶಾಲತೆಯನ್ನು, ಋಷಿಮುನಿಗಳು ಉಪನಿಷತ್ತಿನಲ್ಲಿ ದಾಖಲಿಸಿರುವುದು, ನನಗೆ ನಿಜವಾಗಿಯೂ ಅಚ್ಚರಿ ಮೂಡಿಸಿತು. ಆಧ್ಯತ್ಮ ಸಾಧನೆಯ ಉತ್ತುಂಗ ನೋಡಿದ ಮಾಹಾ ಮುನಿಗಳು ಇಂತಹ ಸಾಕಷ್ಟು ಮಹಾ ಸತ್ಯಗಳನ್ನು ಜಗತ್ತಿಗೆ ಕೊಟ್ಟಿದ್ದಾರೆ. ಎಲ್ಲಾ ಮಹಾ ಮುನಿಗಳಿಗೆ ನನ್ನ ಪ್ರಣಾಮಗಳು.

ಒಂದುವೇಳೆ ನೀವು ಹೊಸದಾಗಿ ಧ್ಯಾನ ಮಾಡುವ ಆಸಕ್ತಿ ಹೊಂದಿದ್ದರೆ, ಧ್ಯಾನದ ಮಹಾ ಶಕ್ತಿಯನ್ನು ನೋಡಲು ಬಯಸಿದರೆ, ನಾನು ಕೆಳಗೆ ಕೊಟ್ಟಿರುವ ಧ್ಯಾನ ಮಾಡುವ ವಿಧಾನ, ಧ್ಯಾನದ ವಿವಿಧ ಹಂತಗಳು, ಮತ್ತು ಧ್ಯಾನದ ವಿಡಿಯೋ ಲಿಂಕ್ ಗಳನ್ನೂ ಕ್ಲಿಕ್ ಮಾಡಿ ನೋಡಿ, ಅವು ನಿಮಗೆ ಧ್ಯಾನ ಸಿದ್ದಿಗೆ ಮತ್ತು ಧ್ಯಾನ ಮಾಡಲು ಸಹಾಯ ಮಾಡುತ್ತವೆ

ಕೈವಲ್ಯೋಪನಿಷತ್

ಉಪನಿಷತ್ತು ಆಶ್ವಲಾಯನ ಋಷಿ ಮತ್ತು ಬ್ರಹ್ಮ ದೇವರ ನಡುವೆ ನಡೆದ ಒಂದು ಉಪನ್ಯಾಸದ ವೇಳೆ ಹೊರಬಂದ ಬೋದನೆಯಾಗಿದೆ. ಇದು ಆತ್ಮಸಾಕ್ಷಾತ್ಕಾರದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಬೋಧನೆಗಳನ್ನು ಒಳಗೊಂಡಿದೆ ಮತ್ತು ಸರ್ವೋಚ್ಚವಾದ ವಾಸ್ತವದೊಂದಿಗೆ ವೈಯಕ್ತಿಕ ಆತ್ಮದ ಏಕತೆಯನ್ನು ಅರ್ಥ ಮಾಡಿಸುತ್ತದೆ ಸತ್ಯವು ಅಜ್ಞಾನದಿಂದ ಉಂಟಾದ ದುಃಖವನ್ನು ಕಳೆದು, ಇದರಿಂದ ಪಡೆದ ಜ್ಞಾನವು ಮುಕ್ತಿಗೆ ಕಾರಣವಾಗುತ್ತದೆ ಎಂದು ಇದು ಸೂಚಿಸುತ್ತದೆ.

ಭದ್ರಂ ಕರ್ಣೇಭಿಃ ಶೃಣುಯಾಂ ದೇವಾಃ

ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ

ಸ್ಥಿರೈರಂಗೈಸ್ತುಷ್ಟುವಾಗಂಸಸ್ತನೂಭಿಃ

ವ್ಯಶೇಂ ದೇವಹಿತಂ ಯದಾಯೂಃ

ಸ್ವಸ್ತಿ ಇನ್ದ್ರೋ ವೃದ್ಧಶ್ರವಾಃ

ಸ್ವಸ್ತಿ ನಃ ಪೂಷಾ ವಿಶ್ವವೇದಾಃ

ಸ್ವಸ್ತಿ ನಷ್ಟಾಕ್ಷರ್ಯೋ ಅರಿಷ್ಟನೇಮಿಃ

ಸ್ವಸ್ತಿ ನೋ ವೃಹಸ್ಪತಿರ್ದಧಾತು

ಶಾಂತಿಃ ಶಾಂತಿಃ ಶಾಂತಿಃ

ದೇವತೆಗಳಾ, ನಾವು ಕಿವಿಗಳಿಂದ ಶುಭ ಪ್ರದವಾದುದನ್ನೇ ಕೇಳೋಣ. ನಾವು ಕಣ್ಣಿನಿಂದ ಶುಭ ಪ್ರದವಾದುದನ್ನೇ ನೋಡೋಣ. ನಿಮ್ಮ ಸ್ತೋತ್ರವನ್ನು ಪಠಿಸುತ್ತ, ನಮಗೆ ಕೊಟ್ಟಿರುವ ಆಯುಷ್ಯವನ್ನು, ಪರಿಪೂರ್ಣವಾದ ಆರೋಗ್ಯದಿಂದ, ಶಕ್ತಿವಂತವಾಗಿ ಜೀವಿಸೋಣ.

ಶ್ಲೋ|| ಕೈವಲ್ಯೋಪನಿಷದ್ವೇದ್ಯಂ, ಕೈವಲ್ಯಾನಂದ ತುಂಡಿಲಮ್ | ಕೈವಲ್ಯಗಿರಿಜಾ ರಾಮಂ, ಸ್ವಮಾತ್ರಂಕಲಯೇ2ನ್ವಹಮ್||

ಮಂ|| ಅಥಾಶ್ವಾಲಯನೋ ಭಗವಂತಂ, ಪರಮೇಷ್ಠಿನಂ ಪರಿಸಮೇತ್ಯೋವಾಚ|| (1)

ಕೀರ್ತಿವಂತನಾದ ಇಂದ್ರನು, ಸರ್ವಜ್ಞನಾದ ಸೂರ್ಯನು, ಆಪತ್ತಿನಿಂದ ರಕ್ಷಿಸುವ ಗರುಡನು, ನಮ್ಮ ಬ್ರಹ್ಮ ವರ್ಚಸ್ನನ್ನು ಕಾಪಾಡುವ ಬೃಹಸ್ಪತಿಯು, ನಮಗೆ ಶುಭವನ್ನು ಆಶೀರ್ವದಿಸುವರು.

ಓಂ ಶಾಂತಿ ಶಾಂತಿ ಶಾಂತಿಃ

ಮೊದಲನೆಯ ಮಂತ್ರ

ಒಂದು ದಿನ ಆಶ್ವಲಾಯನ ಮಹರ್ಷಿ ಪ್ರಜಾಪತಿಯಾದ ಚತುರ್ಮುಖ ಬ್ರಹ್ಮನ ಬಳಿ ಹೋಗಿ, ಹೀಗೆ ಕೇಳಿದರು.

ಮಂ|| ಅಥೀಹಿ ಭಗವಾನ್ ಬ್ರಹ್ಮ ವಿದ್ಯಾಂ ವರಿಷ್ಟಾಂ ಸದಾ ಸದ್ಧಿ ಸೇಸೇವ್ಯಮಾನಾಂ ನಿಗೂಢಾಮ್ ಯಯಾ2 ಚಿರಾ ತ್ಸರ್ವ ಪಾಪಂ ವ್ಯಪೋಹ್ಯ, ಪರಾತ್ಪರಂ ಪುರುಷ ಮುಪೈತಿ ವಿದ್ವಾನ್|| (2)

ಭಗವಾನ್, ಎಲ್ಲಾ ವಿದ್ಯೆಗಳಿಗಿಂತಲೂ ಶ್ರೇಷ್ಠವಾದುದು, ಸತ್ಪುರುಷರೆಲ್ಲರಿಂದಲೂ ನಿರಂತರವಾಗಿ ನೆನಪಿಸಿಕೊಳ್ಳುವ, ಎಷ್ಟೋ ನಿಗೂಢವಾಗಿ ಇರುವ, ಬ್ರಹ್ಮ ವಿದ್ಯೆಯನ್ನು ನನಗೆ ಉಪದೇಶ ಮಾಡಿ. ಬ್ರಹ್ಮ ಜ್ಞಾನಿಯಾದವನು, ಯಾವ ಮಹಾ ವಿದ್ಯೆಯಿಂದ, ತನ್ನ ಪಾಪಗಳನ್ನು ಕಳೆದುಕೊಂಡು, ಸರ್ವ ಶ್ರೇಷ್ಟವಾದ ಪರಮಾತ್ಮನ್ನು ಸೇರುವನೋ. ಅಂತಹ ಪರ ಬ್ರಹ್ಮ ತತ್ವವನ್ನು ನನಗೆ ಉಪದೇಶ ಮಾಡಿ. ಎಂದು ಕೇಳಿದನು.

ಮಂ|| ತಸ್ಮೈ ಸಹೋವಾಚ ಪಿತಾಮಹಶ್ಚ, ಶ್ರದ್ಧಾ ಭಕ್ತಿ ಧ್ಯಾನ ಯೋಗ ದವೈಹಿ| ನಕರ್ಮಣಾ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ತ್ವ ಮಾನಶುಃ || (3)

ಆಶ್ವಲಾಯನ ಅವರ ಬೇಡಿಕೆಯನ್ನು ಕೇಳಿದ ಬ್ರಹ್ಮದೇವರು, ಅವರಿಗೆ ಹೀಗೆ ಹೇಳಿದರು,

ಆಶ್ವಲಾಯ ನಿನ್ನ ಬೇಡಿಕೆ ತುಂಬಾ ಶ್ರೇಷ್ಟವಾದ್ದದ್ದು, ಕರ್ಮಾದಿಂದಾಗಲಿ, ಜನ (ಸಂತಾನ) ದಿಂದಾಗಲಿ, ಹಣ ದಿಂದಾಗಲಿ, ಯಾರು ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಕೇವಲ ತ್ಯಾಗದಿಂದ (ಸನ್ಯಾಸತ್ವ ದಿಂದ) ಮಾತ್ರ ವಿದ್ವಾಂಸರು ಮೋಕ್ಷವನ್ನು ಪಡೆದರು. ನೀನು ಸಹ ಪರಬ್ರಹ್ಮ ತತ್ವ ತಿಳಿಯಬೇಕಂದರೆ, ಶ್ರದ್ದೆ, ಭಕ್ತಿ, ಧ್ಯಾನದ ಅಭ್ಯಾಸದಿಂದ ಮಾತ್ರವೇ ಪರಬ್ರಹ್ಮ ತತ್ವ ತಿಳಿಯಲು ಸಾಧ್ಯ.

ಮಂ|| ಪರೇಣನಾಕಂ ನಿಹಿತಂ ಗುಹಾಯಾಂ, ವಿಭ್ರಾಜತೇ ಯದ್ಯತಯೋ ವಿಶಂತಿ| ವೇದಾಂತ ವಿಜ್ಞಾನ ಸುನಿಶ್ಚಿ ತಾರ್ಥಾಃ ಸನ್ನ್ಯಾಸ ಯೋಗ ದ್ಯತಯಃ ಶುದ್ಧ ಸತ್ತ್ವಾಃ || (4)

ವೆಂದಾತ ವಿಜ್ಞಾನದಿಂದ ಪರತತ್ವವನ್ನ ತಿಳಿದುಕೊಂಡವರು, ಸನ್ಯಾಸ ಯೋಗದಿಂದ ಪರಿಶುದ್ಧವಾದ ಅಂತಃಕರಣ ಹೊಂದಿರುವ, ಯತೀಶ್ವರರು, ಸ್ವರ್ಗಕ್ಕಿಂತಲೂ ಮಿಗಿಲಾದ, ಹೃದಯವೆನ್ನು ಗುಹೆಯಲ್ಲಿ ಇರುವ, ಪರ ಬ್ರಹ್ಮವನ್ನು ಅರಿಯುವರು.

ಮಂ|| ತೇ ಬ್ರಹ್ಮಲೋಕೇಷು ಪರಾನ್ತಕಾಲೇ, ಪರಾಮೃತಾ ತ್ವರಿಮುಚ್ಯನ್ತಿ ಸಮೀಕ್ಷೆ!

ವಿವಿಕ್ತ ದೇಶೇ ಸುಖಾಸನಸ್ಧಃ ಶುಚಿ ಸ್ಸಮಗ್ರೀವಶಿರ ಶ್ಶರೀರಃ || (5)

ಮಂ|| ಅಂತ್ಯಾಶ್ರಮ ಸ್ಥ ಸ್ಸಕಲೇಂದ್ರಿಯಾಣಿ, ನಿರವದ್ಯ ಭಕ್ತ್ಯಾ ಸ್ವಗುರುಂ ಪ್ರಣಮ್ಯ |

ಹೃತ್ಪುಂಡರೀಕಂ ವಿರಜಂ ವಿಶುದ್ಧಂ ವಿನಿದೆವುಣಿ ವೇದ್ಯೆ ವಿಷದಂ ವಿಶೋಕಮ್ || (6)

ಮಂ|| ಅಚಿಂತ್ಯ ಮವ್ಯಕ್ತ ನಾವುತರೂಪಂ ಶಿವ ಪ್ರಶಾಂತ ಮಮೃತಂ ಬ್ರಹ್ಮ ಯೋನಿಮ್|

ತದಾದಿ ಮಧ್ಯಾಂತ ವಿಹೀನಮೇಕಂ ವಿಭುಂ ಚಿದಾನನ್ದ ಮರೂಪ ಮದ್ಭುತಮ್|| (7)

ಮಂ|| ಉಮಾಸಹಾಯಂ ಪರಮೇಶ್ವರಂ ಪ್ರಭುಂ ತ್ರಿಲೋಚನಂ ನೀಲಕಂಠಂ ಪ್ರಶಾಂತಮ್ |

ಧ್ಯಾತ್ವಾ ಮುನಿ ರ್ಗಚ್ಛತಿ ಭೂತಯೋನಿಂ | ಸಮಸ್ತ ಸಾಕ್ಷಿಂ ತಮಸಃ ಪರಸ್ತಾತ್|| (8)

ಅಂತಹ ಜ್ಞಾನವನ್ನು ಪಡೆದ ಯತೀಶ್ವರರು, ಅಂತ್ಯಕಾಲದಲ್ಲಿ ಬ್ರಹ್ಮಲೋಕದಲ್ಲಿ ಇರುವ ಬ್ರಹ್ಮನನ್ನು ಸೇರಿ, ಆತನೊಂದಿಗೆ, ಎಷ್ಟೋ ಶ್ರೇಷ್ಟವಾದ ಅಮರತ್ವವನ್ನು ಹೊಂದುವರು. ಸನ್ಯಾಸ ಆಶ್ರಮವನ್ನು ಸ್ವೀಕರಿಸಿದ ಯತಿಯು, ಪವಿತ್ರನಾಗಿ, ಒಂದು ನಿರ್ಜನ ಪ್ರದೇಶವನ್ನು ಸೇರಿ, ಅಲ್ಲಿ ಸುಖವಾಗಿ ಕುಳಿತುಕೊಂಡು, ತನ್ನ ತಲೆ, ಕುತ್ತಿಗೆ, ಮತ್ತು ಬೆನ್ನನ್ನು ನೇರವಾಗಿ ಇಟ್ಟುಕೊಂಡು,  ಎಲ್ಲಾ ಧರ್ಮಗಳನ್ನು ಬಿಟ್ಟು, ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ತನಗೆ ಬ್ರಹ್ಮ ವಿದ್ಯೆಯನ್ನು ಬೋಧಿಸಿದ ಗುರುವಿಗೆ ನಮಸ್ಕಾರ ಮಾಡಬೇಕು,

ನಂತರ ತನ್ನ ಶರೀರದ ಮದ್ಯದಲ್ಲಿ ಇರುವ, ಹೃದಯ ಕಮಲದಲ್ಲಿ ಸ್ಥಿರವಾಗಿ ಇರುವವನಾದ, ವಿಶುದ್ಧನಾದ, ಇಂದ್ರಿಯಗಳಿಗೆ, ಬುದ್ಧಿಗೆ ಅತೀತನಾದವನು, ದುಃಖ ರಹಿತನಾದವನನ್ನು, ಮಂಗಳಕರನಾದ, ಪರಮ ಶಾಂತ ಸ್ವರೂಪನಾದ, ಮಾಯಾತೀತನಾದ, ಮೋಕ್ಷ ಪ್ರದಾತನಾದ, ನಾಶವಿಲ್ಲದವನು, ಆದಿ, ಮಧ್ಯಂತರ ಜ್ಞಾನಾನಂದ ಸ್ವರೂಪನು, ರೂಪ ರಹಿತನು, ಆಶರ್ಯಕರವಾದ ಸ್ವಭಾವದವನು, ಉಮಾದೇವಿಯ ಜೊತೆಗಿರುವ, ಪರಮೇಶ್ವರನನ್ನು ಭಕ್ತಿ ಶ್ರೇದ್ಧೆಯಿಂದ ಧ್ಯಾನ ಮಾಡಬೇಕು. ಹಾಗೆ ಧ್ಯಾನ ಮಾಡಿದ ಯತೀಶ್ವರರು ಕೊನೆಗೆ ಅವನಲ್ಲೆ ಲೀನವಾಗುವರು.

ಮಂ|| ಬ್ರಹ್ಮಾ ಸಶಿವ ಸ್ಸೇನ್ದ ಸೋಓ ಕ್ಷರಃ ಪರಮ ಸ್ಸ್ವರಾಟ್ |

ಏವ ವಿಷ್ಣು ಸ್ಸ ಪ್ರಾಣ ಸ್ಸ ಕಾಲೋ 2 ಗ್ನಿ ಸ್ಸ ಚಂದ್ರಮಾಃ || (9)

ಯೇತಿಗಳು ಲೀನವಾಗುವ ಪರಮಾತ್ಮನೇ ಬ್ರಹ್ಮ. ಆತನೇ ಶಿವ, ಇಂದ್ರ, ವಿನಾಶವಿಲ್ಲದವನು, ಮಹಾ ಪುರುಷ, ಸ್ವಯಂ ಪ್ರಕಾಶಕನಾದ ವಿಷ್ಣುವು, ಅವನೇ ಪ್ರಾಣ ಸ್ವರೂಪನಾಗಿ, ಹಾಗೆಯೆ ಕಾಲ, ಅಗ್ನಿ, ಚಂದ್ರ ಸ್ವರೂಪನಾಗಿಯೂ ಇದ್ದಾನೆ.

ಮಂ|| ಏವ ಸರ್ವಂ ಯದ್ಭೂತಂ ಯಚ್ಚ ಭವ್ಯಗ್ಂ ಸನಾತನಮ್|

ಜ್ಞಾತ್ವಾ ತಂ ತಂ ಮೃತ್ಯುಮತ್ಯೇತಿ, ನಾನ್ಯಃ ಪಂಥಾ ವಿಮುಕ್ತಯೇ || (10)

ಅವನೇ ಸೃಷ್ಟಿಯಲ್ಲಿ ಇರುವ ಸರ್ವಸ್ವವೂ, ಈಗ ಇರುವವನು, ಹಿಂದೆ ಇದ್ದವನು, ಮುಂದೆ ಬರುವ ಕಾಲದಲ್ಲಿಯೂ ಇರುವವನು ಅವನೇ. ಸನಾತನನಾದ ಪರಮಾತ್ಮನ ಬಗ್ಗೆ ತಿಳಿದುಕೊಂಡವನು, ಮೃತ್ಯುವಿನಿಂದ ತಪ್ಪಿಸಿಕೊಳ್ಳಬಲ್ಲನು, ಹೀಗೆ ಪರಮಾತ್ಮನನ್ನು ಅರಿಯದೆ, ಮೋಕ್ಷವನ್ನು ಪಡೆಯಲು ಬೇರೆ ಯಾವ ದಾರಿಯು ಇಲ್ಲ.

ಮಂ|| ಸರ್ವ ಭೂತಸ್ಥ ಮಾತ್ಮಾನಂ, ಸರ್ವಭೂತಾನಿ ಚಾತ್ಮನಿ|

ಸಂಪಶ್ಯನ್ ಬ್ರಹ್ಮ ಪರಂ, ಯಾತಿ ನಾನ್ಯೇನ ಹೇತುನಾ|| (11)

ಲೋಕದಲ್ಲಿ ಇರುವ ಸಕಲ ಭೂತಗಳಲ್ಲಿ ತನ್ನನ್ನು, ತನ್ನನ್ನು ಸಕಲ ಭೂತಗಳಲ್ಲಿ ಸಕ್ರಮವಾಗಿ ನೋಡಬಲ್ಲವನು, ಪರ ಬ್ರಹ್ಮವನ್ನು ಸಹ ತಿಳಿದುಕೊಳ್ಳಬಲ್ಲನು. ಪರ ಬ್ರಹ್ಮವನ್ನು ರೀತಿಯಲ್ಲದೆ, ಬೇರೆ ಯಾವರೀತಿಯಲ್ಲಿ ಯಾರು ಸಹ ಅರಿಯಲು ಸಾಧ್ಯವಿಲ್ಲ.

ಮಂ|| ಆತ್ಮಾನ ಮರಣಿಂ ಕೃತ್ವಾ, ಪ್ರಣವಂ ಚೋ ತ್ತ ರಾರಣಿಮ್ |

ಜ್ಞಾನ ನಿರ್ಮಥನಾಭ್ಯಾಸಾತ್, ಪಾಶಂ (ಪಾಮಂ) ದಹತಿ ಪಂಡಿತಃ || (12)

ಓಂ ಕಾರವನ್ನು ಮೇಲೆ ಇರುವ ಆರಣಿ ಯಂತೆ, ತನ್ನ ಆತ್ಮವನ್ನು ಕೆಳಗೆ ಇರುವ ಮಡಿಕೆ ಯಂತೆ ಮಾಡಿಕೊಂಡು, ಜ್ಞಾನವನ್ನು ಮಜ್ಜಿಗೆಯ ರೀತಿ ಕಡಿದು, ಅದರಲ್ಲಿ ಸಿಗುವ ಬೆಣ್ಣೆಯಂತಹ ಬ್ರಹ್ಮ ಜ್ಞಾನವನ್ನು ಪಡೆದು, ಅಜ್ಞಾನ ಎನ್ನುವ ಸರಪಳಿಯನ್ನು ಸುಟ್ಟು ಹಾಕುವನು.

ಮಂ|| ಏವ ಮಾಯಾ ಪರಿಮೋಹಿತಾತ್ಮಾ, ದೇಹ ಮಸ್ಥಾಯ ಕರೋತಿ ಸರ್ವಮ್|

ಸ್ತ್ಯನ್ನ (ಸ್ತ್ರೀ-ಅನ್ನ) ಪಾನಾದಿ ವಿಚಿತ್ರಭೋಗೈಃ ಏವ ಜಾಗ್ರ ತ್ಪರಿತೃಪ್ತಿ ಮೇತಿ || (13)

ಮಂ|| ಸ್ವಪ್ನೇ ತು ಜೀವ ಸ್ಸುಖದುಃಖಭೋಕ್ತಾ, ಸ್ವಮಾಯಯಾ ಕಲ್ಪಿತ ವಿಶ್ವಲೋಕೇ|

ಸುಷುಪ್ತಿಕಾಲೇ ಸಕಲೇ ವಿಲೀನೇ, ತಮೋ ಪರ್ಯಾಯಭಿ ಭೂತ ಸ್ಸುಖ ರೂಪಮೇತಿ || (14)

ಸಾಕ್ಷಾತ್ ಪರ ಬ್ರಹ್ಮನೇ, ಮಾಯೆಯ ಮೋಹದಲ್ಲಿ ಸಿಲುಕಿರುವ ಮನಸಿನಿಂದ, ಶರೀರವನ್ನು ಧರಿಸಿ, ಸಕಲ ಕಾರ್ಯಗಳನ್ನು ಮಾಡುತ್ತಿರುವನು. ಅವನೇ ಜಾಗ್ರತಾವಸ್ಥೆಯಲ್ಲಿ ಸ್ತ್ರೀಯನ್ನು, ಅನ್ನ, ನೀರು ಎನ್ನುವ ವಿವಿಧ ಭೋಗಗಳನ್ನು ಅನುಭವಿಸಿ, ಸಂತೃಪ್ತಿ ಹೊಂದುತ್ತಿರುವನು. ಸ್ವಪ್ನಾವಸ್ಥೆಯಲ್ಲಿ ಇರುವ ಜೀವನು, ತನ್ನ ಮಾಯೆಯಿಂದ ಎಷ್ಟೋ ಲೋಕಗಳನ್ನು ಊಹಿಸಿಕೊಳ್ಳುವನು, ಆಯಾ ಲೋಕಗಳಲ್ಲಿ, ಸುಖ ದುಃಖಗಳನ್ನು ಅನುಭವಿಸುವನು. ಹಾಗೆ ಅಜ್ಞಾನದಿಂದ ಆವರಿಸಲ್ಪಟ್ಟ ಅವನೇ, ಶುಶುಪ್ತಿ (ಗಾಢ ನಿದ್ರೆ) ಕಾಲದಲ್ಲಿ, ಎಲ್ಲಾ ಆತ್ಮದಲ್ಲಿ ಲೀನವಾಗಿದ್ದಾಗ, ಅಜ್ಞಾನ ದಿಂದ ಅವರಿಸಲ್ಪಟು ಸ್ವರೂಪ ಸುಖವನ್ನು ಅನುಭವಿಸುವನು. ಹಾಗಾಗಿ, ಶುಶುಪ್ತಿಯ ಅವಸ್ಥೆಯಲ್ಲಿ ಜೀವನಿಗೆ ಸಿಗುವ ಸುಖವು ಅಜ್ಞಾನದಿಂದ ಬಂದದ್ದು ಎಂದು ಹೇಳಲ್ಪಟ್ಟಿದೆ.

ಮಂ|| ಪುನಶ್ಚ ಜನ್ಮಾಂತರ ಕರ್ಮಯೋಗಾತ್, ಏವ ಜೀವಃ ಸ್ವಪಿತ ಪ್ರಬುದ್ಧಃ|

ಪುರತ್ರಯೇ ಕ್ರೀಡಾತಿ ಯಶ್ಚಜೀವಃ ತತಸ್ತು ಜಾತಗ್ಂ ಸಕಲಂ ವಿಚಿತ್ರಮ್ || (15)

ವಿಧವಾಗಿ ಶುಶುಪ್ತಿ ಅವಸ್ಥೆಯಲ್ಲಿ ಇರುವ ಜೀವಿಯೇ, ಪೂರ್ವ ಜನ್ಮ ಕರ್ಮಾ ಸಂಬಂಧದಿಂದ, ತಾನು ಮಾಡಿದ ಕರ್ಮಾ ಫಲವನ್ನು ಅನುಭವಿಸಲೆಂದು, ಮತ್ತೆ ಎಚ್ಚರಗೊಳ್ಳುವನು. ವಿಧವಾಗಿ ಜೀವನು ಜಾಗ್ರತ್, ಸ್ವಪ್ನ, ಶುಶುಪ್ತಿ ಎನ್ನುವ ಮೂರು ಅವಸ್ಥೆಗಳಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡಿರುತ್ತಾನೆ. ಅಂತಹ ವ್ಯಕ್ತಿಯಿಂದಲೇ, ವಿಚಿತ್ರವಾದ ಪ್ರಪಂಚ ಸೃಸ್ಟಿಸಲ್ಪಡುತ್ತದೆ.

ಮಂ|| ಅಧಾರ ಮಾನಂದ ಮಖಂಡ ಬೋಧಂ ಯಸ್ಮಿನ್ ಲಯಂ ಯಾತಿ ಪುರತ್ರಯಂಚ |

ಏತಸ್ಮಾ ಜ್ಞಾಯತೇ ಪ್ರಾಣೋ, ಮನ ಸ್ಪರ್ವೇಂದ್ರಿಯಾಣೀಚ|

ಖಂ ವಾಯು ಗ್ಜ್ಯೋತಿ ರಾಪಶ್ಚ, ಪೃಥಿವೀ ವಿಶ್ವಸ್ಯ ಧಾರಣೀ|| (16)

ಜೀವನು ಧರಿಸುವ ಸ್ತೂಲ, ಸೂಕ್ಶ್ಮ, ಕಾರಣ ಶರೀರಗಳು ಎನ್ನುವ ಮೂರು. ಸಮಸ್ತಕ್ಕೆ ಆಧಾರವಾಗಿರುವವನು , ಆನಂದವಾಗಿ, ಅಖಂಡ ಜ್ಞಾನಸ್ವರೂಪನಾದ ಪರ ಬ್ರಹ್ಮದಲ್ಲಿ ಲೀನವಾಗಿ ಹೋಗುವವು. ಹಾಗೆ ಮೂರು ಶರೀರಗಳನ್ನು ತನ್ನಲ್ಲಿ ಲೀನಾ ಮಾಡಿಕೊಂಡ ಪರ ಬ್ರಹ್ಮ ದಿಂದಲೇ, ಪ್ರಾಣ, ಮನಸ್ಸು, ಎಲ್ಲಾ ಇಂದ್ರಿಯಗಳು, ಆಕಾಶವು, ವಾಯುವು, ಅಗ್ನಿ, ನೀರು, ಭೂಮಿ, ಎನ್ನುವ ಪಂಚ ಭೂತಗಳು ಆವಿರ್ಭವಿಸಲ್ಪಟ್ಟಿವೆ.

ಮಂ|| ಯತ್ಸರಂ ಬ್ರಹ್ಮ ಸರ್ವಾತ್ಮಾ, ವಿಶ್ವಸ್ಯಾಯತನ ಮಹತ್|

ಸೂಕ್ಷ್ಮಾ ತ್ಸೂಕ್ಷ್ಮತರಂ ನಿತ್ಯಂ, ತತ್ತ್ವ ಮೇವ ತ್ವಮೇವತತ್ || (17)

ಯಾವ ಪರ ಬ್ರಹ್ಮನು ಎಲ್ಲರಲ್ಲಿ ಆತ್ಮ ಸ್ವರೂಪನಾಗಿ ಇರುವನೋ, ಯಾವ ಪರಮಾತ್ಮ ಸೃಷ್ಠಿಗೆಲ್ಲ ಆಧಾರವಾಗಿ ಇರುವನೋ, ಸೂಕ್ಷ್ಮ ಕ್ಕಿಂತಲೂ, ಅತೀ ಸೂಕ್ಶ್ಮವಾಗಿ ಇರುವ, ಪರ ಬ್ರಹ್ಮ ಯಾರೋ, ಅವನೇ ನೀನು. ನೀನೆ ಅವನು.

ಮಂ|| ಜಾಗ್ರತ್ ಸ್ವಪ್ನ ಸುಶುಪ್ತ್ಯಾದಿ, ಪ್ರಪಂಚ ಯತ್ ಪ್ರಕಾಶತೇ|

ತದ್ಬಹ್ಮಾಃ ಹಮಿತಿ ಜ್ಞಾತ್ವಾ, ಸರ್ವಬಂದೈ ಪ್ರಮುಚ್ಯತೇ|| (18)

ಜೀವನು ತನ್ನ ಜಾಗ್ರತ ಸ್ವಪ್ನ ಶುಶುಪ್ತಿ ಅವಸ್ಥೆಯಲ್ಲಿ, ಯಾವ ಪ್ರಪಂಚದ ಕುರಿತು ತಿಳಿದುಕೊಳ್ಳುತ್ತಿರುವನೋ, ಅವನೇ ಪರ ಬ್ರಹ್ಮ. ಪರ ಬ್ರಹ್ಮ ತಾನೇ ಎಂದು ಅರಿತ ಜೀವನು, ಎಲ್ಲಾ ಬಂಧನಗಳಿಂದ ವಿಮುಕ್ತಿ ಪಡೆಯುವನು. ಹೀಗೆ ಬಂಧನ ದಿಂದ ವಿಮುಕ್ತಿ ಪಡೆಯುವುದೇ ಮೋಕ್ಷವು.

ಮಂ|| ತ್ರಿಶುಧಾಮಸು ಯದ್ಭೋಗ್ಯಂ, ಭೋಕ್ತಾ ಭೋಗಶ್ಚ ಯದ್ಭ ವೇತ್|

ತೇಭ್ಯೋ ವಿಲಕ್ಷಣ ಸ್ಸಾಕ್ಷೀ, ಚಿನ್ಮಾತ್ರೋ2 ಹಂ ಸದಾ ಶಿವಃ || (19)

ಸ್ತೂಲ, ಸೂಕ್ಷ್ಮ, ಕಾರಣ ಶರೀರಗಳಿಂದ, ಜಾಗ್ರತ, ಸ್ವಪ್ನ, ಶುಶುಪ್ತಿ ಅವಸ್ಥೆಯಲ್ಲಿ ಅನುಭವಿಸಲ್ಪಡುವ, ಅನುಭವಿಸುವವನು, ಅನುಭವಗಳಿಗೆ ಅತೀತವಾಗಿ ಇರುವವನು, ಸಾಕ್ಷಿ, ಸಚ್ಚಿದಾನಂದ ಸ್ವರೂಪನು ಆದ ಸದಾ ಶಿವನು, ತಾನೇ ಎಂದು ಅರಿತವನು ಮೋಕ್ಷವನ್ನು ಹೊಂದುವನು.

ಮಂ|| ಯಾಗುವವ ಸಕಲಂ ಜಾತಂ ಮಯಿ ಸರ್ವಂ ಪ್ರತಿಷ್ಠಿತಮ್ |

ಮಯಿ ಸರ್ವಂ ಲಯಂ ಯಾತಿ, ತದ್ಬಹ್ಮಾ ಅದ್ವಯ ಮಸ್ಮ್ಯಹಮ್|| (20)

ನನ್ನಿಂದಲೇ ಸಕಲ ಸೃಷ್ಟಿಯು ಸೃಷ್ಠಿಸಲ್ಪಟ್ಟಿದೆ, ನನ್ನಲ್ಲೇ ಪ್ರಪಂಚವೆಲ್ಲಾ ಅಡಗಿದೆ, ನನ್ನಲ್ಲೇ ಕೊನೆಗೆ ಪ್ರಪಂಚವೆಲ್ಲ ಲಯವಾಗಿ ಹೋಗಲಿದೆ, ಅಂತಹ ನಾನೆೇ ಅದ್ವಯ ಪರ ಬ್ರಹ್ಮನು.

ಮಂ|| ಅನೋರಣೀಯನಹಮೇವ ತದ್ವನ್ಮಹಾನಹಂ ವಿಶ್ವಮಿದಂ ವಿಚಿತ್ರಮ್|

ಪುರಾತನೋಭಂ ಪುರುಷೋ ಹಮೀಶೋ, ಹಿರಣ್ಮಯೋಹಂ ಶಿವರೂಪ ಮಸ್ಮಿ || (21)

ಅಣುವಿಗಿಂತಲೂ ಅಣುವಾಗಿ, ವಿಶಾಲಕ್ಕಿಂತಲೂ ವಿಶಾಲವಾಗಿ, ವಿಚಿತ್ರ ವಿಶ್ವವಾಗಿ ಪ್ರಕಾಶಿಸುವವನು ನಾನೆ, ನಾನೇ ಆದಿ ಪುರುಷನು, ಈಶ್ವರನು, ಹಿರಣ್ಮಯ ರೂಪನು, ಮಂಗಳ ಸ್ವರೂಪನು ನಾನೇ.

ಮಂ|| ಅಪಾಣಿಪಾದೋ ಔಟ್ ಮಚಿನ್ತ್ಯ ಶಕ್ತಿಃ ಪಶ್ಯಾ ಮಯಚಕ್ಷುಃ ಶೃಣೋ ಮಯಕರ್ಣಃ|

ಅಹಂ ವಿಜಾನಾಮಿ ವಿವಿ ಕ್ತರೂಪೋ, ಚಾಸ್ತಿ ವೇತ್ತಾ ಮಮ ಚಿತ್ಸದಾಓಹಮ್|| (22)

ನಾನು ಕೈ ಕಾಲು ಇಲ್ಲದವನಾಗಿದ್ದರು, ಎಷ್ಟೋ ಮಹಾ ಶಕ್ತಿವಂತನು. ನಾನು ಕಣ್ಣು ಇಲ್ಲದೆಯೇ ಎಲ್ಲವನ್ನು ನೋಡಬಲ್ಲೆನು. ಕಿವಿ ಇಲ್ಲದಿದ್ದರೂ ಎಲ್ಲವನ್ನು ಕೇಳಬಲ್ಲೆನು, ನಾನು ಸಮಸ್ತ ವಿಷಯಗಳನ್ನು ಅರಿಯಬಲ್ಲೆನು, ನನ್ನನ್ನು ಸಂಪೂರ್ಣವಾಗಿ ಯಾರು ಅರಿಯಲು ಸಾದ್ಯವಿಲ್ಲ, ನಾನು ಸಚ್ಚಿದಾನಂದ ಸ್ವರೂಪನು, ನನಗೆ ಸರಿ ಸಾಟಿ ಯಾರು ಇಲ್ಲ.

ಮಂ|| ವೇದೈ ರನೇಕೈ ರಹಮೇವ ವೇದ್ಯೋ, ವೇದಾಂತಕೃ ದ್ವೇದ ವಿದೇವ ಚಾಪದ ಹಮ್|

ಪುಣ್ಯಪಾಪೇ ಮಮನಾಸ್ತಿ ನಾಶೋ, ನಜನ್ಮ ದೇಹೇಂದ್ರಿಯ ಬುದ್ಧಿ ರಸ್ತಿ|| (23)

ಎಲ್ಲಾ ವೇದಗಳಿಂದ ಅರಿಯಲ್ಪಡುವವನು ನಾನೇ, ವೇದವ್ಯಾಸನು, ವೇದ ಕರ್ತನು ನಾನೇ. ನನಗೆ ಜನ್ಮವಿಲ್ಲ. ನನಗೆ ಯಾವ ಪಾಪ ಪುಣ್ಯಗಳು ಇಲ್ಲನನಗೆ ನಾಶವೆನ್ನುವುದೇ ಇಲ್ಲ, ಶರೀರವು, ಇಂದ್ರಿಯಗಳು, ಬುದ್ಧಿ, ಎನ್ನುವವು ಯಾವು ನನಗೆ ಇಲ್ಲ.

ಮಂ|| ಭೂಮಿ ರಾಪೋ ಮಮ ವಹ್ನಿ ರಸ್ತಿ, ನದಾನಿಲೋ ಮೇಸ್ತಿ ನಚಾಂಬರಂಚ |

ಏವಂ ವಿದಿತ್ವಾ ಪರಮಾತ್ಮ ರೂಪ, ಗುಹಾಶಯಂ ನಿಷ್ಕಳ ಮದ್ವಿತೀಯಮ್|

ಸಮಸ್ತ ಸಾಕ್ಷಿಗ್ಂ ಸದಾ ಸದ್ವಿಹೀನಮ್ ಪ್ರಯಾತಿ ಶುದ್ಧಂ ಪರಮಾತ್ಮ ರೂಪಮ್|| (24)

ಭೂಮಿ, ಅಗ್ನಿ, ನೀರು, ಗಾಳಿ, ಆಕಾಶ, ಎನ್ನುವ ಪಂಚ ಭೂತಗಳು ಯಾವುವು ನನ್ನಲ್ಲಿ ಇಲ್ಲ, ವಿಧವಾಗಿ ತಿಳಿದುಕೊಂಡು, "ಅದ್ವಿತೀಯನು, ಯಾವ ಕಳಂಕ ಇಲ್ಲದವನು, ಸಮಸ್ತಕ್ಕೆ ಸಾಕ್ಷಿಯಾಗಿ ಇರುವವನು, ಸತ್-ಅಸತ್ ಎನ್ನುವವು ಇಲ್ಲದವನು, ಶುದ್ಧವಾದವನೂ ಆದ ಪರ ಬ್ರಹ್ಮ ರೂಪವನ್ನು ನಾನು ಪಡೆಯುತ್ತಿರುವೆನುಎಂದು ಯಾರು ಭಾವಿಸುವರೋ, ಅವರು ಪರ ಬ್ರಹ್ಮದಲ್ಲಿಯೇ ಸೇರಿ ಅಲ್ಲಿಯೇ ಐಕ್ಯವಾಗುವರು.

ಮಂ|| ಶ್ಶತರುದ್ರೀಯ ಮಧೀತೇ ಸೋಭಗ್ನಿ ಪೂತೋಭವತಿ| ವಾಯು ಪೂತೋಭವತಿ|

ಸ್ವರ್ಣಸ್ತೇಯಾ ತ್ಪೂತೋ ಭವತಿ ಸುರಾಪಾನಾ ತ್ಪೂತೋಭವತಿ|

ಬ್ರಹ್ಮಹತ್ಯಾಯಾಃ ಪೂತೋ ಭವತಿ| ಕೃತ್ಯಾಓಕೃತ್ಯಾ ತ್ಪೂತೋ ಭವತಿ|

ತಸ್ಮಾದ್ವಿಮುಕ್ತ ಮಾಶ್ರಿತೋ ಭವತಿ ಅತ್ಯಾಶ್ರಮೀ ಸರ್ವದಾ ಸಕೃದ್ವಾ ಜಪೇತ್| (25)

ಯಾರು ಶತ ರುದ್ರಿಯದಲ್ಲಿ ಭಾಗವಾಗಿ ಹೇಳಲ್ಪಟ್ಟ, ಉಪನಿಷತ್ ಅನ್ನು ಅಧ್ಯಯನ ಮಾಡುವನೋ, ಅಂತಹ ವ್ಯಕ್ತಿಯು ಅಗ್ನಿ, ವಾಯುವಿನ ರೀತಿ ಪರಿಶುದ್ಧನಾಗುವನು, ಬಂಗಾರ ಅಪಹರಣ, ಮದ್ಯಪಾನ, ಬ್ರಹ್ಮ ಹತ್ಯಾ, ಮಾಡಬಾರದ ಕೆಲಸ ಮಾಡಿ ಬರುವ ದೋಷದಂತಹ ಪಾಪಗಳಿಂದಲು ವಿಮುಕ್ತಿ ಹೊಂದುವನು. ಅಷ್ಟೇ ಅಲ್ಲಾ ಆಶ್ರಮ ಧರ್ಮವನ್ನು ಅತಿಕ್ರಮಿಸುವುದರಿಂದ ಬರುವ ಪಾಪವನ್ನು ಸಹ ಕಳೆದುಕೊಳ್ಳುವನು. ಈಗೆ ವರ್ಣಾಶ್ರಮ ಧರ್ಮವನ್ನು ಬಿಟ್ಟವನು, ಉಪನಿಷತ್ ಅನ್ನು ನಿರಂತರವಾಗಿ ಆಗಲಿ, ಅಥವಾ ಆಗಾಗ ಆಗಲಿ ಪಠಿಸಬೇಕು.

ಮಂ|| ಅನೇನ ಜ್ಞಾನಮಾಪ್ನೋತಿ, ಸಂಸಾರಾರ್ಣವ ನಾಶನಮ್|

ತಸ್ಮಾ ದೇವಂ ವಿದಿತ್ವೈನಂ, ಕೈವಲ್ಯಂ ಪದ ಮಶ್ನುತೇ||

ಕೈವಲ್ಯಂ ಪದಮಶ್ನುತ ಇತಿ|| (26)

ವಿಧವಾಗಿ ಆತ್ಮ ಸ್ವರೂಪನಾದ ಪರ ಬ್ರಹ್ಮವನ್ನು ಅರಿತವನು, ಸಂಸಾರ ಸಾಗರ ದಿಂದ ಹೊರಗೆ ಬರುವ, ಜ್ಞಾನವನ್ನು ಪಡೆಯುವನು. ಅದರಿಂದ ಅವನಿಗೆ ಕೈವಲ್ಯವೂ ಸಿಗುತ್ತದೆಕೈವಲ್ಯದಿಂದ ಶಾಶ್ವತವಾದ ಸುಖವನ್ನು ಅವನು ಪಡೆಯುವನು

।। ಓಂ ತತ್ ಸತ್ ।।

 

ನೀವು ಜೀವನ, ಆರೋಗ್ಯ, ಆಧ್ಯಾತ್ಮಿಕ ಮತ್ತು ಧ್ಯಾನದ ವೀಡಿಯೊಗಳನ್ನು ವೀಕ್ಷಿಸಲು, ದಯವಿಟ್ಟು ನನ್ನ ಕನ್ನಡ ಭಾಷೆಯ YouTube ಚಾನಲ್‌ಗೆ ಭೇಟಿ ನೀಡಿ: ಇಲ್ಲಿ ಕ್ಲಿಕ್ ಮಾಡಿ ಅಥವಾ Youtube ನಲ್ಲಿ ಹೀಗೆ ಹುಡುಕಿ: @gcvkannada

ಧ್ಯಾನದ ಬಗೆಗಿನ ಮತ್ತು ಧ್ಯಾನ ಮಾಡುವ ಯು ಟ್ಯೂಬ್ ವಿಡಿಯೋಗಳ ಲಿಂಕ್...ಇಲ್ಲಿ ಕ್ಲಿಕ್ ಮಾಡಿ 


ಧನ್ಯವಾದಗಳು 

ಜಿ ಸಿ ವಿ