Saturday, July 25, 2026

ಉಸಿರಾಟ - ಮನುಷ್ಯನ - ಆಯಸ್ಸು

 

ಉಸಿರಾಟ - ಮನುಷ್ಯನ - ಆಯಸ್ಸು
ನಿಮ್ಮ ಆಯಸ್ಸನ್ನು ಜಾಸ್ತಿ ಮಾಡಿಕೊಳ್ಳಲು ನೀವು ಬಯಸಿದರೆ? ನಿಮ್ಮ ಉಸಿರಾಟವನ್ನು ಸ್ವಾಭಾವಿಕವಾಗಿ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಅದು ನಿಮಗೆ ಕೆಲವು ವರ್ಷಗಳ ಆಯುಸ್ಸನ್ನು ಜಾಸ್ತಿ ಮಾಡುತ್ತದೆ. ಅಷ್ಟೇ ಅಲ್ಲ ಅದರಿಂದ ನಿಮ್ಮ ಆರೋಗ್ಯವು ಉತ್ತಮವಾಗುತ್ತದೆ. ನನ್ನ ಅನುಭವದ ಬಗ್ಗೆ ತಿಳಿಯಲು 👇

ಮನುಷ್ಯನ ಆಯಸ್ಸು


ಒಂದು ವಾಹನಕ್ಕೆ ಹೇಗೆ ಇಷ್ಟು ಕಿಲೋಮೀಟರ್ ಓಡಿದರೆ ಅದರ ಆಯುಷ್ಯ ಮುಗಿಯುತ್ತದೆ ಎಂದು ಒಂದು ಲೆಕ್ಕವಿರುವುದೋ, ಹಾಗೆಯೇ ಯೋಗಶಾಸ್ತ್ರದ ಪ್ರಕಾರ ಮನುಷ್ಯನ ಆಯುಷ್ಯ ಇಷ್ಟು ಉಸಿರಾಟಗಳು ಎಂದು ಒಂದು ಲೆಕ್ಕವಿರುತ್ತದೆ.

ಸಾಮಾನ್ಯವಾಗಿ ವಯಸ್ಕರು 1 ನಿಮಿಷಕ್ಕೆ 12 ರಿಂದ 20 ಬಾರಿ ಉಸಿರಾಡುವರು. ಯಾರು ಅತಿ ಹೆಚ್ಚು ಒತ್ತಡ ಮತ್ತು ಟೆನ್ಶನ್‌ನಲ್ಲಿ ಜೀವಿಸುವರೋ, ಅವರು ಒಂದು ನಿಮಿಷಕ್ಕೆ 20ಕ್ಕಿಂತ ಹೆಚ್ಚು ಬಾರಿ ಉಸಿರಾಟ ನಡೆಸುವರು. ಅವರ ಉಸಿರಾಟದ ಲೆಕ್ಕ ಕೊನೆಗೊಂಡಾಗ ಅವರು ಸಾವನ್ನಪ್ಪುವರು. ಹಾಗಾಗಿ, ಒತ್ತಡದಲ್ಲಿ ಜೀವಿಸುವ ಜನ ಬೇಗ ಸಾಯುವರು.

ಹಾಗಾದರೆ, ಉಸಿರಾಟವನ್ನು ಕಡಿಮೆ ಮಾಡುವುದು ಹೇಗೆ? ಬಲವಂತವಾಗಿ ಇದನ್ನು ಕಡಿಮೆ ಮಾಡಲು ಹೋಗಬೇಡಿ. ನೀವು ಶಾಂತವಾಗಿ ಜೀವಿಸಿದರೆ, ನಿಮ್ಮ ಉಸಿರಾಟದ ಸಂಖ್ಯೆ ಅದಾಗಿಯೇ ಕಡಿಮೆಯಾಗುತ್ತದೆ. ಒಂದು ವೇಳೆ ನೀವು ಧ್ಯಾನವನ್ನು ಅಭ್ಯಾಸ ಮಾಡಿದರೆ, ಅದು ನಿಮ್ಮ ಉಸಿರಾಟದ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಉದಾಹರಣೆಗೆ, ನಾನು ಧ್ಯಾನ ಆರಂಭ ಮಾಡಿದ ಮೊದಲ ಎರಡು ವರ್ಷದಲ್ಲಿ ಒಂದು ನಿಮಿಷಕ್ಕೆ ಆರು ಬಾರಿ ಉಸಿರಾಟ ಮಾಡುತ್ತಿದ್ದೆ. ಈಗ ನಾನು ಒಂದು ನಿಮಿಷಕ್ಕೆ 3 ರಿಂದ 4 ಬಾರಿ ಮಾತ್ರ ಉಸಿರಾಟ ಮಾಡುತ್ತಿದ್ದೇನೆ. ನಾನು ನನ್ನ ಉಸಿರಾಟದ ಸಂಖ್ಯೆಯನ್ನು ಬಲವಂತವಾಗಿ ಕಡಿಮೆ ಮಾಡಿಕೊಂಡಿಲ್ಲ. ಧ್ಯಾನದ ಅಭ್ಯಾಸದಿಂದ ಅದಾಗಿಯೇ ಕಡಿಮೆಯಾಗಿದೆ. ಅದು ನಾನು ಯಾವುದೇ ಪ್ರಯತ್ನ ಮಾಡದೆ, ಸಾಮಾನ್ಯವಾಗಿ ಉಸಿರಾಟ ಮಾಡುವಾಗ ಗಮನಿಸಿದ ಸಂಖ್ಯೆ.

ನಾನು ಸಹ ಹಿಂದೆ ಒತ್ತಡದ ಜೀವನ ನಡೆಸುತ್ತಿದ್ದೆ. ನನ್ನ ಆರೋಗ್ಯ ಏರುಪೇರಾದಾಗ, ಆಧ್ಯಾತ್ಮದ ಸಾಧನೆಯ ಮೂಲಕ ನನ್ನಲ್ಲಿ ಶಾಂತಿ, ಆನಂದವನ್ನು ಕಂಡುಕೊಂಡೆ. ಅಷ್ಟು ಟೆನ್ಶನ್, ಒತ್ತಡದ ಜೀವನ ನಡೆಸಿರುವ ನಾನು ಯಾವಾಗಲೋ ಮರಣಿಸಬೇಕಿತ್ತು!

ನಾನು ಇನ್ನೂ ಜೀವಂತವಾಗಿರಲು ಕಾರಣ, ನನ್ನ ಉಸಿರಾಟದ ಸಂಖ್ಯೆಯಲ್ಲಿ ಆಗಿರುವ ಗಣನೀಯವಾದ ಬದಲಾವಣೆ. ಅದು ನನಗೆ ಸಿಕ್ಕಿರುವುದು ಧ್ಯಾನದಿಂದ. ಧ್ಯಾನವು ಖಂಡಿತವಾಗಿಯೂ ಮನುಷ್ಯರ ಆರೋಗ್ಯ ಮತ್ತು ಆಯುಷ್ಯವನ್ನು ವೃದ್ಧಿ ಮಾಡುತ್ತದೆ ಎನ್ನುವುದಕ್ಕೆ ನಾನೇ ಜೀವಂತ ಉದಾಹರಣೆ.

----------------------------------------------------------------------------------

ನಾನು ನನ್ನ ಉಸಿರಾಟವನ್ನು 2024 ನವೆಂಬರ್‌ನಲ್ಲಿ ಮೊಬೈಲ್‌ನ ಟೈಮರ್‌ ಸೆಟ್‌ ಮಾಡಿ ಪರಿಶೀಲಿಸಿದೆ, ಉಸಿರಾಟದ ಸಂಖ್ಯೆ ನೋಡಿ ಅಚ್ಚರಿಯಾಯಿತು. ಮೊದಲನೆಯ ಲೆಕ್ಕ ತಪ್ಪಿರಬಹುದು ಎಂದು ಮೂರು ಬಾರಿ ಪರಿಶೀಲಿಸಿ ನೋಡಿದೆ. ಅದು ಒಂದು ನಿಮಿಷಕ್ಕೆ 3–4 ಸೆಕೆಂಡುಗಳ ಅಂತರದಲ್ಲಿ ಬಂತು.

ಇಲ್ಲಿದೆ ಅಂದು ನಾನು ನೋಟ್ ಮಾಡಿಕೊಂಡ ಉಸಿರಾಟದ ಲೆಕ್ಕ...👇

*ಮೊದಲ ಲೆಕ್ಕ:* 8 ನಿಮಿಷ 45 ಸೆಕೆಂಡುಗಳು, 30 ಉಸಿರಾಟಗಳು ಪ್ರತಿ ನಿಮಿಷಕ್ಕೆ ಸುಮಾರು 3.43 ಉಸಿರಾಟಗಳು.

*ಎರಡನೇ ಲೆಕ್ಕ:* 5 ನಿಮಿಷ 10 ಸೆಕೆಂಡುಗಳು, 15 ಉಸಿರಾಟಗಳು ಪ್ರತಿ ನಿಮಿಷಕ್ಕೆ ಸುಮಾರು 2.89 ಉಸಿರಾಟಗಳು.

*ಮೂರನೇ ಲೆಕ್ಕ:* 9 ನಿಮಿಷ 40 ಸೆಕೆಂಡುಗಳು, 30 ಉಸಿರಾಟಗಳು ಪ್ರತಿ ನಿಮಿಷಕ್ಕೆ ಸುಮಾರು 3.11 ಉಸಿರಾಟಗಳು.

ಬಲವಂತವಾಗಿ ಉಸಿರಾಟವನ್ನು ಕಡಿಮೆ ಮಾಡಲು ಹೋಗಬೇಡಿ. ಅದು ಒಳ್ಳೆಯದಲ್ಲ; ಉಸಿರಾಟದ ಸಂಖ್ಯೆ ಸ್ವಾಭಾವಿಕವಾಗಿಯೇ ಕಡಿಮೆಯಾಗಬೇಕು.

ನೆನಪಿಡಿ, ನಾವು ಎಷ್ಟು ಗಂಟೆ ಧ್ಯಾನ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಎಷ್ಟು ಬೇಗ ಉನ್ನತ ಮಟ್ಟದ ಧ್ಯಾನಸ್ಥಿತಿಯನ್ನು ತಲುಪುತ್ತೇವೆ ಎನ್ನುವುದು ಮುಖ್ಯ.

ಧ್ಯಾನದಲ್ಲಿ ಉನ್ನತ ಸ್ಥಿತಿಯನ್ನು ತಲುಪಲು ಕೆಲವರಿಗೆ 2 ನಿಮಿಷ, ಕೆಲವರಿಗೆ ಹತ್ತು ನಿಮಿಷ, ಮತ್ತೆ ಕೆಲವರಿಗೆ ಒಂದು ಗಂಟೆಯ ಸಮಯ ಬೇಕಾಗಬಹುದು.

ಹಂತ ಹಂತವಾಗಿ ಅಭ್ಯಾಸ ಮಾಡಿ. ಸಮಯದ ಲೆಕ್ಕ ಇಡುವ ಅಥವಾ ಬಲವಂತವಾಗಿ ಧ್ಯಾನ ಮಾಡುವ ಅವಶ್ಯಕತೆ ಇಲ್ಲ.

ಸೂಚನೆ: ಪದೇಪದೇ ಲೆಕ್ಕ ಹಾಕಲು ಹೋಗಬೇಡಿ, ಅದು ಸಹ ಒಂದು ವಿಧವಾದ ಸ್ಟ್ರೆಸ್ ಮತ್ತು ಟೆನ್ಷನ್ ಸೃಷ್ಟಿ ಮಾಡುತ್ತದೆ.
----------------------------------------------------------------------------------

ಧ್ಯಾನದಲಿ ಪ್ರಾಣಶಕ್ತಿ ಮುಖ್ಯ. ನಾವು ಉಸಿರಾಡುವಾಗ ಉಸಿರಿನ ಜೊತೆ ಬರೀ ಆಕ್ಸಿಜನ್ ಮಾತ್ರ ಹೋಗುವುದಿಲ್ಲ. ಉಸಿರಿನ ಜೊತೆಗೆ ಪ್ರಾಣ/ಜೀವ ಶಕ್ತಿ ಹೋಗುತ್ತದೆ. ಪ್ರಾಣ ಶಕ್ತಿಯೇ ನಮ್ಮನ್ನ ಜೀವಂತವಾಗಿ ಇಟ್ಟಿರುವುದು. ನೀವು ಗಮನಿಸಿದರೆ, ಆಸ್ಪತ್ರೆಯಲ್ಲಿ ಉಸಿರು ನಿಲ್ಲಿಸಿದ ವ್ಯಕ್ತಿಗೆ ಎಷ್ಟೇ ಆಕ್ಸಿಜನ್ ಕೊಟ್ಟರೂ ಸತ್ತ ಮನುಷ್ಯ ಬದುಕುವುದಿಲ್ಲ. ನಾನು ಹಿಮಾಲಯಕ್ಕೆ ಹೋದಾಗಲೂ, ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಇದ್ದಾಗಲೂ ನನ್ನ ಆಕ್ಸಿಜನ್ ಲೆವೆಲ್ ದಿನವೂ ಚೆಕ್ ಮಾಡುತ್ತಿದ್ದರು, ಅಲ್ಲಿಯೂ ನನ್ನ ಆಕ್ಸಿಜನ್ ಲೆವೆಲ್ ಸರಿಯಾಗಿಯೇ ಇತ್ತು.
----------------------------------------------------------------------------------

ಧ್ಯಾನದ ಬಗ್ಗೆ ಸಮಗ್ರ ಮಾಹಿತಿ, ಧ್ಯಾನದ ವಿಧಾನ, ಪದ್ಧತಿ ಮತ್ತು ಹಂತಗಳ ಬಗೆಗಿನ ವಿಡಿಯೋ ಲಿಂಕ್ ಗಳು ನನ್ನ ಗೂಗಲ್  ಬ್ಲಾಗ್ ನಲ್ಲಿ ನಿಮಗೆ ಸಿಗುತ್ತವೆ...👇



----------------------------------------------------------------------------------

🙏ಧನ್ಯವಾದಗಳು🙏
💐 ಜಿ ಸಿ ವಿ 💐

Monday, April 7, 2025

ಜೀವನದಲ್ಲಿ ಸುಖ, ಸಂತೋಷ, ಆನಂದ ಮತ್ತು ಆರೋಗ್ಯ ಬೇಕೆಂದರೆ?

 

ನಿಮ್ಮ ಜೀವನದಲ್ಲಿ ಸುಖ, ಸಂತೋಷ, ಆನಂದ ಮತ್ತು ಆರೋಗ್ಯ ಬೇಕೆಂದರೆ, ಮೂರನ್ನು ಮಾಡಿ, ಮತ್ತು ಮೂರನ್ನು ಮಾಡಬೇಡಿ... 👇👇

 

ನೀವು ಮೂರನ್ನು ದಿನವೂ ತಪ್ಪದೇ ಆಚರಿಸಿ...👇

 

1. ದಿನವೂ ಕನಿಷ್ಠ ಒಂದು ಗಂಟೆ ಮಣ್ಣಿನ ನೆಲದ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿ. (97% ಮಾನಸಿಕ, ದೈಹಿಕ, ಆರೋಗ್ಯ ಸಮಸ್ಯೆಗಳು ಮಣ್ಣಿನ ನೆಲದ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿದರೆ ಗುಣ ಆಗುತ್ತವೆ. ಅಷ್ಟೇ ಅಲ್ಲ, ಜೀರ್ಣ ಸಮಸ್ಯೆಗೆ, ಬರಿಗಾಲಿನ ನಡಿಗೆ ರಾಮ ಬಾಣ)

 

2. ದಿನವೂ ತಪ್ಪದೇ ಒಂದು ಗಂಟೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ. (ಮೂಳೆ, ಚರ್ಮ, ಮತ್ತು ಕ್ಯಾನ್ಸರ್ ಸಮಸ್ಯೆಗೆ, ಸೂರ್ಯನ ಬಿಸಿಲು ರಾಮ ಬಾಣ. ಅಷ್ಟೆ ಅಲ್ಲ ಮಧ್ಯಾಹ್ನ ಸೂರ್ಯನ ಬಿಸಿಲು, ತುಂಬಾ ಒಳ್ಳೆಯದು, ಇದು ವೈಜ್ಞಾನಿಕವಾಗಿ ಸಾಬೀತಾಗಿದೆ)

 

3. ದಿನವೂ ತಪ್ಪದೇ ಅರ್ಧ ಗಂಟೆ ಧ್ಯಾನ ಅಥವಾ ದೇವರ ನಾಮ ಜಪ ಮಾಡಿ. - ನಿಮ್ಮ ಇಷ್ಟ ದೇವರ ನಾಮ ಜಪ (ದೇವರನ್ನು ಬಿಟ್ಟವರು ಆಸ್ಪತ್ರೆ ಸೇರುವರು, ದೇವರ ಸ್ಮರಣೆ ಮಾಡುವವರು ಹಾಯಾಗಿ ಜೀವಿಸುವರು)

 

ನೀವು ಮೂರನ್ನು ಯಾವುದೇ ಕಾರಣಕ್ಕೂ ಮಾಡಬೇಡಿ... 👇

 

1. ಸಾಲ ಮಾಡಬೇಡಿ. - ಸಾಲ ನಿಮ್ಮ ಜೀವನದ ಶಾಂತಿ, ನೆಮ್ಮದಿ ಹಾಳುಮಾಡಿ, ಭಯ, ಆತಂಕ ಸೃಷ್ಟಿ ಮಾಡಿ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ.

 

2. ಜೂಜು ಆಡಬೇಡಿ - ಚಟಗಳಲ್ಲಿ ಅತ್ಯಂತ ಕೆಟ್ಟ, ಅಪಾಯಕಾರಿ ಚಟ ಜೂಜು. ಇದು ನಿಮ್ಮ ಕುಟುಂಬವನ್ನೇ ನಾಶ ಮಾಡುತ್ತದೆ. ಶ್ರೀ ಕೃಷ್ಣ ಪಾಂಡವರ ಕಡೆ ಇದ್ದರು, ಜೂಜು ಆಡುವ ಸಮಯದಲ್ಲಿ ಕೃಷ್ಣ ಪಾಂಡವರಿಗೆ ಸಹಾಯ ಮಾಡಲಿಲ್ಲ. ಜೂಜು ಆಡುವವರನ್ನು ದೇವರು ಸಹ ಕಾಪಾಡುವುದಿಲ್ಲ.

 

3. ದುಶ್ಚಟ ಮಾಡಬೇಡಿ - (ಮದ್ಯಪಾನ, ತಂಬಾಕು, ಇತರೆ ಮತ್ತಿನ ಪದಾರ್ಥ) ಯಾರು ಇವಕ್ಕೆ ದಾಸರಾಗುವರೋ ಅವರನ್ನು ಎಲ್ಲರೂ ಕಡಗಣಿಸುವರು, ಅವರ ಗೌರವ ನಾಶ ಆಗುತ್ತದೆ. ಅದರ ಜೊತೆಗೆ ಆರೋಗ್ಯವೂ ಹಾಳಾಗಿ, ಇಡೀ ಕುಟುಂಬಕ್ಕೆ ಹಣದ ಸಮಸ್ಯೆ ಸೃಷ್ಟಿ ಆಗುತ್ತದೆ. 

 

ತಪ್ಪು ಮಾಡುವುದು ತಪ್ಪಲ್ಲ, ಅದನ್ನು ತಿದ್ದಿಕೊಳ್ಳದೆ ಇರುವುದು ತಪ್ಪು. ನಾನು ಸಹ ನನ್ನ ಜೀವನದಲ್ಲಿ ಸಾಕಷ್ಟು ತಪ್ಪು ಮಾಡಿದ್ದೇನೆ, ಅವನ್ನು ತಿದ್ದಿಕೊಂಡು, ಮನುಷ್ಯನಾಗಿ, ಈಗ ನನ್ನ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇನೆ. 

ಒಳ್ಳೆಯ ಮಾರ್ಗದಲ್ಲಿ ನಡೆಯಿರಿ, ಅದು ನಿಮಗೂ ಮತ್ತು ಸಮಾಜಕ್ಕೂ ಒಳ್ಳೆಯದು. ಶ್ರೀರಾಮನ ಕೃಪೆ ಎಲ್ಲರಿಗೂ ಸಿಗಲಿ ಎಂದು ಆಶಿಸುತ್ತೇನೆ.

                                                                                                                                                                                                             🙏 ಧನ್ಯವಾದಗಳು 🙏

                                                                                       💐 ಜಿ ಸಿ ವಿ  💐